16 ರಿಂದ 18ನೆಯ ಶತಮಾನದವರೆಗಿನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಮರ್ಕೆಂಟಿಲಿಸಂ ಎಂಬ ಹೆಸರಿನ ಧನಪ್ರಧಾನವ್ಯವಸ್ಥೆಯಿತ್ತು. ಈ ವ್ಯವಸ್ಥೆ 18ನೆಯ ಶತಮಾನದ ಮಧ್ಯಭಾಗದಿಂದ ಕ್ಷಯಿಸಿದರೂ ಅದರ ಪ್ರಭಾವವನ್ನು ಇಂದಿನ ಪ್ರಪಂಚದ ಆರ್ಥಿಕ ವ್ಯವಸ್ಥೆಯಲ್ಲೂ ಕಡೆಗಣಿಸುವಂತಿಲ್ಲ. ಮಧ್ಯಯುಗದಲ್ಲಿ ಇಂಗ್ಲೆಂಡಿನ ಜನರ ಆಕಾಂಕ್ಷೆ ಪ್ರಾದೇಶಿಕ ಸ್ವಾವಲಂಬನವಾಗಿತ್ತು. ಪ್ರತಿಯೊಬ್ಬನೂ ಸ್ವಾವಲಂಬಿಯಾಗುವುದನ್ನೇ ಮುಖ್ಯ ಗುರಿಯಾಗಿಟ್ಟುಕೊಂಡಿರುತ್ತಿದ್ದ. ಆದರೆ ಮಧ್ಯಯುಗದ ಕೊನೆಯ ವೇಳೆಗೆ ಸಾಮಾಜಿಕ ಬದಲಾವಣೆಗಳಾದ್ದರಿಂದ ಆರ್ಥಿಕ ಚಟುವಟಿಕೆ ಪ್ರಾದೇಶಿಕ ಸ್ವಾವಲಂಬನೆಯಿಂದ ರಾಷ್ಟ್ರೀಯ ಸ್ವಾವಲಂಬನೆಯ ಕಡೆಗೆ ಹರಿಯಿತು. ಸರ್ಕಾರ ಇದನ್ನು ಸಾಧಿಸುವುದಕ್ಕೆ ಜನರ ಆರ್ಥಿಕ ಹಾಗೂ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸಬೇಕೆಂದು ಭಾವಿಸಿತು.

ಬಲವಾದ ಹಾಗೂ ಆರ್ಥಿಕವಾಗಿ ಪರಿಪುರ್ಣವಾದ ರಾಷ್ಟ್ರ ಕಟ್ಟುವುದೇ ಸರ್ಕಾರದ ಗುರಿಯಾಯಿತು. ಇಂಥ ಗುರಿಯಲ್ಲಿ ನಂಬಿಕೆಯಿಟ್ಟುಕೊಂಡಿದ್ದವರು ಈ ಗುರಿಸಾಧನೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದರು. ಪಶುಪಾಲನೆಗಿಂತ ಉಳುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟರು. ಆಹಾರದಲ್ಲಿ ಸ್ವಾವಲಂಬಿಗಳಾಗುವುದು ಅತ್ಯಂತ ಅಗತ್ಯವೆಂದು ಅವರು ನಂಬಿದ್ದರು. ಗೋಧಿ ಇತ್ಯಾದಿ ಫಸಲು ಬೆಳೆಯುವುದಕ್ಕೆ ನೇರವಾದ ಪ್ರೋತ್ಸಾಹ ಸಿಗುತ್ತಿತ್ತು. ಈ ನಿಯಮಗಳಿಂದಾಗಿ ಆದ ಪರಿಣಾಮವೆಂದರೆ ಈ ಯುಗದಲ್ಲಿ ಇಂಗ್ಲೆಂಡ್ ಆಹಾರದ ವಿಷಯದಲ್ಲಿ ಹೆಚ್ಚು ಕಡಿಮೆ ಸ್ವಾವಲಂಬಿಯಾಗಿತ್ತು. ಭೂಮಿಯ ಗೇಣಿ ಹೆಚ್ಚಾಯಿತು.

ಕೈಗಾರಿಕೆಯ ರಂಗದಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಖಾನೆಗಳಿಗೆ ಉತ್ತೇಜನ ಸಿಗುತ್ತಿತ್ತು. ಔದ್ಯೋಗಿಕ ರಂಗಕ್ಕೆ ಅನೇಕ ರೀತಿಯಲ್ಲಿ ಪ್ರೋತ್ಸಾಹ ಕೊಡಲಾಗುತ್ತಿತ್ತು. ಸಿದ್ಧಪಡಿಸಿದ ವಸ್ತುಗಳ ಆಮದನ್ನು ನಿಷೇಧಿಸಲಾಗುತ್ತಿತ್ತು. ಆದರೆ ಕಚ್ಚಾವಸ್ತುಗಳ ಆಮದನ್ನು ಸ್ವಾಗತಿಸಲಾಗು ತ್ತಿತ್ತು. ಉದಾಹರಣೆಗೆ, 18ನೆಯ ಶತಮಾನದ ಪ್ರಾರಂಭದಲ್ಲಿ ರೇಷ್ಮೆ ವಸ್ತುಗಳ ನಿರ್ಯಾತಕ್ಕೆ ಪ್ರೋತ್ಸಾಹ ಧನವನ್ನು ಕೊಡಲಾಗುತ್ತಿತ್ತು. ಉಣ್ಣೆ ಕಾರ್ಖಾನೆಗಳಿಗೆ ಉತ್ತೇಜನ ಕೊಡುವುದಕ್ಕಾಗಿ ಎಲಿಜಬೆತ್ ರಾಣಿ ಕುರಿಗಳ ನಿರ್ಯಾತವನ್ನು ರದ್ದು ಮಾಡಿದಳು. ವಿದೇಶೀ ವಸ್ತುಗಳ ಅನುಭೋಗವನ್ನು ನಿಷೇಧಿಸಲಾಗುತ್ತಿತ್ತು. ಇದು ಯಾವ ಮಟ್ಟ ಮುಟ್ಟಿತೆಂದರೆ ಇಂಗ್ಲೆಂಡಿನವರು ವಿದೇಶೀ ಹ್ಯಾಟುಗಳನ್ನು ಧರಿಸಬಾರದು, ಶವವನ್ನು ಇಂಗ್ಲಿಷ್ ಉಣ್ಣೆಯ ಬಟ್ಟೆಯಿಂದಲೇ ಸುತ್ತಿ ಹೂಳಬೇಕು-ಮುಂತಾದ ಕಟ್ಟುಕಟ್ಟಳೆಗಳು ಜಾರಿಗೆಬಂದುವು.

ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಂಕ ನಿರ್ಬಂಧಗಳ ಮೂಲಕ ನಿಯಂತ್ರಿಸಲಾಗು ತ್ತಿತ್ತು. ತಮ್ಮ ವಸಾಹತುಗಳಿಂದ ಕಚ್ಚಾ ಮಾಲನ್ನು ಆಮದು ಮಾಡಿಕೊಂಡು, ಇಂಗ್ಲೆಂಡಿನ ಕಾರ್ಖಾನೆಗಳಲ್ಲಿ ಅದನ್ನು ಸಿದ್ಧವಸ್ತುವಾಗಿ ಮಾರ್ಪಡಿಸಿ ರಫ್ತು ಮಾಡಿ ಚಿನ್ನ ಸಂಪಾದಿಸುವುದ ರಲ್ಲಿ ದೃಢವಾದ ನಂಬಿಕೆಯಿತ್ತು. ವಸಾಹತುಗಳು ಇಂಗ್ಲೆಂಡಿನ ಆರ್ಥಿಕ ಬೆಳವಣಿಗೆಯನ್ನು ಪೋಷಿಸಲು ಮಾತ್ರ ಇವೆ ಎಂಬುದಾಗಿ ಈ ಧನಪ್ರಾಧಾನ್ಯವಾದಿಗಳ ಭಾವನೆಯಾಗಿತ್ತು. ಇದು ಬಹಳಮಟ್ಟಿಗೆ ವಸಾಹತುಗಳ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸಿತೆಂದು ಹೇಳಬಹುದು. ಸಾಧ್ಯವಾದಷ್ಟು ಮಟ್ಟಿಗೆ ರಾಷ್ಟ್ರಕ್ಕೆ ಚಿನ್ನಬೆಳ್ಳಿಯನ್ನು ಸಂಪಾದಿಸಿ ರಾಷ್ಟ್ರವನ್ನು ಬಲಪಡಿಸುವುದೇ ಗುರಿಯಾಗಿದ್ದ ಈ ನೀತಿಯಿಂದ ರಾಷ್ಟ್ರದ ಸೈನಿಕ ಶಕ್ತಿಯನ್ನು ಬಲಪಡಿಸುವು ದಕ್ಕೂ ಸಹಾಯವಾಗುವುದೆಂದು ಅವರು ನಂಬಿದ್ದರು. ಸ್ಪೇನ್, ಪೋರ್ಚುಗಲ್ಲುಗಳಿಗಿದ್ದಂತೆ ಇಂಗ್ಲೆಂಡಿಗೆ ಚಿನ್ನಬೆಳ್ಳಿಯ ಗಣಿಗಳಿರಲಿಲ್ಲ. ಆದ್ದರಿಂದ ಇವುಗಳನ್ನು ಶೇಖರಿಸುವುದು ಅಂತಾರಾಷ್ಟ್ರೀಯ ವ್ಯಾಪಾರದ ಮೂಲಕ ಮಾತ್ರ ಸಾಧ್ಯವಿತ್ತು. ಚಿನ್ನಬೆಳ್ಳಿಯ ನಿರ್ಯಾತವನ್ನು ನಿಷೇಧಿಸಲಾಗಿತ್ತು. ಅವುಗಳ ಆಮದನ್ನು ಸ್ವಾಗತಿಸಲಾಗುತ್ತಿತ್ತು. ಹಡಗುಗಳು ವಿದೇಶೀ ವ್ಯಾಪಾರಕ್ಕೆ ಅತ್ಯಂತ ಅಗತ್ಯವಾಗಿದ್ದುದರಿಂದ ಅವುಗಳನ್ನು ವೃದ್ಧಿಪಡಿಸುವುದಕ್ಕೂ ತೀವ್ರವಾಗಿ ಪ್ರೋತ್ಸಾಹ ನೀಡಲಾಗುತ್ತಿತ್ತು.

ಈ ವ್ಯವಸ್ಥೆಯ ಸಿದ್ಧಿ ಬಹಳ ನಿಯಮಿತವಾಗಿತ್ತೆಂದು ಹೇಳಬಹುದು. ಏಕೆಂದರೆ ಎಲ್ಲ ರಾಷ್ಟ್ರಗಳೂ ಇಂಗ್ಲೆಂಡಿನಂತೆಯೇ ತಮ್ಮ ಚಿನ್ನಬೆಳ್ಳಿಯ ಶೇಖರಣೆಯನ್ನು ರಕ್ಷಿಸಿಕೊಳ್ಳುವು ದರಲ್ಲಿ ಆಸಕ್ತವಾಗಿದ್ದವೇ ಹೊರತು ಅದನ್ನು ಇಂಗ್ಲೆಂಡಿಗೆ ನಿರ್ಯಾತ ಮಾಡುವುದರಲ್ಲಲ್ಲ. ಚಿನ್ನಬೆಳ್ಳಿಗಳ ರಫ್ತಿನಲ್ಲ್ಲಿ ನಿಷೇಧವಿದ್ದರೂ ಪರಸ್ಪರ ರಾಷ್ಟ್ರಗಳಲ್ಲಿ ವ್ಯಾಪಾರ ನಡೆಯಲೇ ಬೇಕಾಗಿದ್ದುದರಿಂದ ಈ ಲೋಹಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವುದು ಅತ್ಯಾವಶ್ಯಕವಾಗಿತ್ತು. ಅಂತೂ ಈ ಧೋರಣೆಯಿಂದ ಇಂಗ್ಲೆಂಡಿಗೆ ಉಪಕಾರವಾಯಿತು. ಅದೆಂದರೆ, ವಿದೇಶೀ ಆಮದಿನ ಸುಂಕನಿರ್ಬಂಧದಿಂದಾಗಿ ಅನೇಕ ಕಾರ್ಖಾನೆಗಳು ತೀವ್ರಗತಿಯಲ್ಲಿ ಪ್ರಗತಿ ಹೊಂದುವುದಕ್ಕೆ ಸಾಧ್ಯವಾಯಿತು. ಹಡಗು ನಿರ್ಮಾಣಕ್ಕೆ ಪ್ರೋತ್ಸಾಹ ಸಿಕ್ಕಿದ್ದರಿಂದ ಅದು ಮತ್ತು ಬಂದರು ವಿಸ್ತರಣೆಯ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯಿತು.

ಆದರೂ ಹಣಶೇಖರಣೆಗೆ ಹೆಚ್ಚಿನ ಪ್ರಾಧಾನ್ಯವಿತ್ತು. ಆಯಾತಕ್ಕೆ ಕಡಿಮೆ ಪ್ರಾಮುಖ್ಯವೂ ನಿರ್ಯಾತಕ್ಕೆ ಹೆಚ್ಚಿನ ಪ್ರಾಧಾನ್ಯವೂ ಇದ್ದವು. ಇದರಿಂದ ಸ್ವಾರ್ಥದ ಅಂಶ ಪ್ರಕಟವಾದಂತಾಯಿತು. ಅಂತಾರಾಷ್ಟ್ರೀಯ ಸಹಕಾರಕ್ಕೆ ಬೆಲೆ ಕಡಿಮೆಯಾಯಿತು. ಆದರೂ ಈ ತತ್ತ್ವಗಳು ಸು.200 ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಪ್ರಚಲಿತವಿದ್ದವು.

ಈ ಧೋರಣೆಗೆ ಸಂಬಂಧಪಟ್ಟಂತೆ ಎರಡು ಮುಖ್ಯ ವಿಷಯಗಳನ್ನು ನಾವು ಬಳಸಬಹುದು. ಮೊದಲನೆಯದಾಗಿ, ಈ ನೀತಿಯಿಂದಾಗಿ ಇಂಗ್ಲೆಂಡ್, ಫ್ರಾನ್ಸ್, ಸ್ಪೇನ್ ಮತ್ತು ಹಾಲೆಂಡುಗಳ ನಡುವೆ ವಾಣಿಜ್ಯ ವಿಷಯಗಳಲ್ಲಿ ಘರ್ಷಣೆ ಆರಂಭವಾಯಿತು. ಇದು ಸುಮಾರು 3 ಶತಮಾನಗಳ ಕಾಲ ಮುಂದುವರಿಯಿತು. ಎರಡನೆಯದಾಗಿ, ಪ್ರಥಮ ಮಹಾಯುದ್ಧದ ಅನಂತರ ಅನೇಕ ರಾಷ್ಟ್ರಗಳು ಈ ತತ್ತ್ವಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಆರ್ಥಿಕ ನೀತಿಯಲ್ಲಿ ಕಾಣಿಸಿಕೊಂಡವು. ಹೆಚ್ಚು ಸ್ವಾವಲಂಬಿಗಳಾಗ ಬೇಕೆಂಬುದೇ ಇದಕ್ಕೆ ಮುಖ್ಯ ಕಾರಣವಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ